ಶಿಕ್ಷಣದಿಂದ ಮಾತ್ರ ಗೌರವಯುತ ಬದುಕು ಸಾಧ್ಯ ; ಹಿರಿಯ ಸಿವಿಲ್ ನ್ಯಾಯಾಧೀಶ ಆಶಪ್ಪ ಸಣಮನಿ ಕರೆ

ತೇರದಾಳ: ವಿದ್ಯಾರ್ಥಿ ಜೀವನದ ಆರಂಭಿಕ ಹಂತದಲ್ಲಿ ಶ್ರದ್ಧೆಯಿಂದ ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿದರೆ ಮಾತ್ರ ಸಮಾಜದಲ್ಲಿ ಗೌರವಯುತ ಸ್ಥಾನಮಾನ ಗಳಿಸಲು ಸಾಧ್ಯ ಎಂದು ಬನಹಟ್ಟಿಯ ಹಿರಿಯ ದಿವಾನಿ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರಾದ ಆಶಪ್ಪ ಬಿ. ಸಣಮನಿ ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಬಾಗಲಕೋಟೆ ಜಿಲ್ಲಾ ಘಟಕ ಮತ್ತು ತೇರದಾಳ ತಾಲೂಕು ಘಟಕದ ಸಹಯೋಗದಲ್ಲಿ, ಪಟ್ಟಣದ ತಕ್ಷಶಿಲಾ ಮಹಾಬುದ್ಧವಿಹಾರ ಇಂಟರ್ನ್ಯಾಶನಲ್ ಚಾರಿಟೇಬಲ್ ಟ್ರಸ್ಟ್ ಆವರಣದಲ್ಲಿ “ಹಿರಿಯ ನಾಗರಿಕರ ದಿನಾಚರಣೆ” ಅಂಗವಾಗಿ ಆಯೋಜಿಸಲಾಗಿದ್ದ ‘ಪುಸ್ತಕಾವಲೋಕನ-೮’ ಹಾಗೂ ‘ಕಾನೂನು ಅರಿವು ಮತ್ತು ನೆರವು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ನ್ಯಾಯಾಧೀಶರು, “ಬಡತನ ಮತ್ತು ಕಷ್ಟದ ಸಂದರ್ಭಗಳಲ್ಲಿ ಕಾನೂನು ಸೌಲಭ್ಯಗಳು ಇಂದು ನೊಂದವರ ಮನೆ ಬಾಗಿಲಿಗೆ ತಲುಪುತ್ತಿವೆ. ಆರ್ಥಿಕ ಮುಗ್ಗಟ್ಟಿನಿಂದ ನ್ಯಾಯಾಲಯಕ್ಕೆ ಅಲೆಯಲು ಸಾಧ್ಯವಾಗದ ಅಸಹಾಯಕರಿಗೆ ತಾಲೂಕು ಕಾನೂನು ಸೇವಾ ಸಮಿತಿ ಸದಾ ಬೆಂಬಲವಾಗಿ ನಿಲ್ಲಲಿದ್ದು, ಇದರ ಪ್ರಯೋಜನವನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕು” ಎಂದರು.
೨೫ ವರ್ಷ ಶ್ರಮಿಸಿದರೆ ೭೫ ವರ್ಷ ಗೌರವದ ಜೀವನ ;
ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನಾದರ್ಶಗಳನ್ನು ಉಲ್ಲೇಖಿಸಿದ ಅವರು, “ವಿದ್ಯಾರ್ಥಿ ಜೀವನದ ೨೫ ವರ್ಷಗಳ ಕಾಲ ತಲೆತಗ್ಗಿಸಿ ಶ್ರದ್ಧೆಯಿಂದ ಅಧ್ಯಯನ ಮಾಡಿದರೆ, ಮುಂದಿನ ೭೫ ವರ್ಷಗಳ ಕಾಲ ಸಮಾಜದಲ್ಲಿ ತಲೆ ಎತ್ತಿ ಗೌರವದಿಂದ ಬದುಕಬಹುದು. ದೀಪದ ಬೆಳಕಿನಲ್ಲೇ ಓದಿ ಇಡೀ ದೇಶಕ್ಕೆ ಸಂವಿಧಾನ ಬರೆದುಕೊಟ್ಟ ಬಾಬಾಸಾಹೇಬರು ಜಗತ್ತೇ ಮೆಚ್ಚುವ ಮಹಾನ್ ಜ್ಞಾನಿಯಾಗಿದ್ದಾರೆ. ಪ್ರಸ್ತುತ ವಿಶ್ವದ ಸುಮಾರು ೧೫೦ ರಾಷ್ಟ್ರಗಳಲ್ಲಿ ಅವರ ಪ್ರತಿಮೆಗಳಿದ್ದು, ಜಯಂತಿ ಆಚರಿಸಲಾಗುತ್ತಿದೆ. ಪೋಷಕರಿಗೆ ನಾವು ನೀಡಬಹುದಾದ ಶ್ರೇಷ್ಠ ಗೌರವ ಎಂದರೆ ಅದು ಶಿಕ್ಷಣ ಮಾತ್ರ” ಎಂದರು.
ಕನ್ನಡ ಮಾಧ್ಯಮದ ಬಗ್ಗೆ ಕೀಳರಿಮೆ ಬೇಡ ;
ತಮ್ಮದೇ ಗಡಿನಾಡಿನ ಹಿನ್ನೆಲೆಯನ್ನು ನೆನಪಿಸಿಕೊಂಡ ನ್ಯಾಯಾಧೀಶರು, “ಕನ್ನಡ ಮಾಧ್ಯಮದಲ್ಲೇ ಎಲ್ಎಲ್ಬಿ ವರೆಗೆ ವ್ಯಾಸಂಗ ಮಾಡಿದ ನಾನು ಇಂದು ಆಂಗ್ಲ ಭಾಷೆಯಲ್ಲಿ ನ್ಯಾಯಾಲಯದ ತೀರ್ಪುಗಳನ್ನು ನೀಡುತ್ತಿದ್ದೇವೆ. ಕನ್ನಡದಲ್ಲೇ ಐಎಎಸ್ ಪರೀಕ್ಷೆ ಬರೆದು ತೇರ್ಗಡೆಯಾದ ಕೆ. ಶಿವರಾಮ್ ಅವರ ಸಾಧನೆ ನಮಗೆಲ್ಲ ಆದರ್ಶ. ಆಂಗ್ಲ ಭಾಷೆಗೆ ಇರುವುದೇ ಕೇವಲ ೨೬ ಅಕ್ಷರಗಳು, ಅದಕ್ಕೆ ಶಶಭಯಪಡುವ ಅಗತ್ಯವಿಲ್ಲ. ಭಾಷೆಯ ಕೀಳರಿಮೆ ತೊರೆದು ಬದುಕಿನಲ್ಲಿ ಸ್ಪಷ್ಟ ಗುರಿಯಿಟ್ಟುಕೊಂಡು ಮುನ್ನಡೆದರೆ ಯಶಸ್ಸು ನಿಶ್ಚಿತ” ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಬಾಗಲಕೋಟೆಯ ಪರಮ ಪೂಜ್ಯ ಧಮ್ಮಪಾಲ ಬಂತೇಜಿ ವಹಿಸಿದ್ದರು. ತೇರದಾಳ ಪುರಸಭೆಯ ಮಾಜಿ ಅಧ್ಯಕ್ಷೆ ಶ್ರೀಮತಿ ಶಿಲ್ಪಾ ಗೌತಮ ರೋಡಕರ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಬನಹಟ್ಟಿಯ ಪ್ರಧಾನ ದಿವಾನಿ ನ್ಯಾಯಾಧೀಶೆ ಶ್ರೀಮತಿ ಸೌಮ್ಯ ಹೊಲಿ, ೧ನೇ ಹೆಚ್ಚುವರಿ ದಿವಾನಿ ನ್ಯಾಯಾಧೀಶೆ ಶ್ರೀಮತಿ ಮಾಪ್ರೀದ್ ಡಿಯಾಸ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಸಾಪ ತಾಲೂಕು ಘಟಕದ ಅಧ್ಯಕ್ಷ ಗಂಗಾಧರ ಮ. ಮೋಪಗಾರ, ತೇರದಾಳ ಪೊಲೀಸ್ ಠಾಣೆಯ ಅರಕ್ಷಕ ಉಪನಿರೀಕ್ಷಕ ಶಿವಾನಂದ ಸಿಂಗನ್ನವರ, ಬನಹಟ್ಟಿ ವಕೀಲರ ಸಂಘದ ಅಧ್ಯಕ್ಷ ಶ್ರೀಕಾಂತ ಕುಲಕರ್ಣಿ, ಕಾರ್ಯದರ್ಶಿ ಆರ್.ಎಸ್. ಸಂಪಗಾAವಿ, ತಾಲೂಕು ಕಾನೂನು ಸೇವಾ ಸಮಿತಿಯ ಕಾರ್ಯನಿರ್ವಾಹಕ ಸದಸ್ಯ ಕಾರ್ಯದರ್ಶಿ ಆರ್.ಜೆ. ಶಹಾ ಹಾಗೂ ದಲಿತ ಮುಖಂಡ ದಯಾನಂದ ಕಾಳೆ ಸೇರಿದಂತೆ ಸ್ಥಳೀಯ ವಕೀಲರು, ಹಿರಿಯ ನಾಗರಿಕರು, ಕಸಾಪ ಪದಾಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

