ಹಿರಿಯ ನಾಗರಿಕರ ಸಮಸ್ಯೆಗಳಿಗೆ ಸ್ಪಂದಿಸಲು ‘ಎಲ್ಡರ್ಲೈನ್ – 14567’ ಸಹಾಯವಾಣಿ ಸದ್ಬಳಕೆಗೆ ಕರೆ
ತೇರದಾಳದಲ್ಲಿ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮ
ತೇರದಾಳ:

ಇಂದಿನ ಆಧುನಿಕ ಯುಗದಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಬೆಳೆಸಿದರೆ ಹಿರಿಯ ನಾಗರಿಕರ ರಕ್ಷಣೆಗೆ ಯಾವುದೇ ಕಾನೂನುಗಳಾಗಲಿ ಅಥವಾ ಪ್ರತ್ಯೇಕ ಆಚರಣೆಗಳಾಗಲಿ ಬೇಕಾಗುವುದಿಲ್ಲ ಎಂದು ತೇರದಾಳ ಪಟ್ಟಣದ ಠಾಣಾಧಿಕಾರಿ (ಪಿಎಸ್ಐ) ಸಿಂಗನ್ ತಿಳಿಸಿದರು.
ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಪೊಲೀಸ್ ಠಾಣೆಗೆ ಬರುವ ಹಿರಿಯ ನಾಗರಿಕರ ಸಂಖ್ಯೆ ಹೆಚ್ಚಾಗುತ್ತಿದ್ದು, ಮಕ್ಕಳು ಸರಿಯಾಗಿ ನೋಡಿಕೊಳ್ಳುತ್ತಿಲ್ಲ, ಆಸ್ತಿಯಲ್ಲಿ ಪಾಲು ನೀಡುತ್ತಿಲ್ಲ ಎಂಬಿತ್ಯಾದಿ ದೂರುಗಳು ಸಾಮಾನ್ಯವಾಗಿವೆ ಎಂದು ವಿಷಾದ ವ್ಯಕ್ತಪಡಿಸಿದರು. ಇಂತಹ ದೂರುಗಳು ಬಂದಾಗ ಠಾಣಾ ಹಂತದಲ್ಲೇ ಮಕ್ಕಳನ್ನು ಕರೆಸಿ ತಿಳಿಹೇಳಿ ರಾಜಿ-ಸಂಧಾನಕ್ಕೆ ಪ್ರಯತ್ನಿಸುತ್ತೇವೆ; ಅಲ್ಲಿಯೂ ಬಗೆಹರಿಯದಿದ್ದರೆ ಹಿರಿಯ ಅಧಿಕಾರಿಗಳ ಹಾಗೂ ನ್ಯಾಯಾಲಯದ ಮೊರೆ ಹೋಗುವಂತೆ ಮಾರ್ಗದರ್ಶನ ನೀಡಲಾಗುತ್ತಿದೆ ಎಂದರು.
’ಎಲ್ಡರ್ಲೈನ್ – 14567′ ಉಚಿತ ಸಹಾಯವಾಣಿ:
ಹಿರಿಯ ನಾಗರಿಕರ ನೆರವಿಗಾಗಿ ಸರ್ಕಾರವು ‘ಎಲ್ಡರ್ಲೈನ್’ ಎಂಬ ಟೋಲ್ಫ್ರೀ ಸಹಾಯವಾಣಿ (14567) ಆರಂಭಿಸಿದೆ. ಕರ್ನಾಟಕ ಸೇರಿದಂತೆ ದೇಶದ ಆರು ರಾಜ್ಯಗಳಲ್ಲಿ ಪ್ರಾಯೋಗಿಕವಾಗಿ ಈ ಸೇವೆ ಲಭ್ಯವಿದೆ. ವಾರದ ಏಳೂ ದಿನಗಳ ಕಾಲ, ಪ್ರತಿದಿನ ಬೆಳಿಗ್ಗೆ 8 ರಿಂದ ರಾತ್ರಿ 8 ಗಂಟೆಯವರೆಗೆ ಈ ಸಹಾಯವಾಣಿ ಕಾರ್ಯನಿರ್ವಹಿಸಲಿದ್ದು, ಹಿರಿಯರು ತಮ್ಮ ಸಮಸ್ಯೆಗಳು ಅಥವಾ ಅಹವಾಲುಗಳನ್ನು ದಾಖಲಿಸಿ ಪರಿಹಾರ ಕಂಡುಕೊಳ್ಳಬಹುದು ಎಂದು ಮಾಹಿತಿ ನೀಡಿದರು.
ವಿದ್ಯಾರ್ಥಿನಿಯರಿಗೆ ಪ್ರೇರಣೆ:
ವೇದಿಕೆಯಲ್ಲಿದ್ದ ಮಹಿಳಾ ನ್ಯಾಯಾಧೀಶರನ್ನು ಉಲ್ಲೇಖಿಸಿ ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದ ಅವರು, “ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ” ಎಂಬ ನಾಣ್ನುಡಿಯಂತೆ, ಉತ್ತಮ ಶಿಕ್ಷಣ ಪಡೆದು ಸಮಾಜದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸುವಂತೆ ಹುರಿದುಂಬಿಸಿದರು.

