ವಿದ್ಯಾರ್ಥಿನಿಯರಿಗೆ ಶಿಷ್ಯವೇತನ ಮಂಜೂರಾತಿ ಪತ್ರ ವಿತರಣೆ

ಬನಹಟ್ಟಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.), ಜಮಖಂಡಿ ತಾಲೂಕು ವತಿಯಿಂದ ಬನಹಟ್ಟಿ, ಯಲ್ಲಟ್ಟಿ ಹಾಗೂ ಕುಲಹಳ್ಳಿ ವಲಯಗಳ ಒಕ್ಕೂಟ ಪದಾಧಿಕಾರಿಗಳ ತರಬೇತಿ ಹಾಗೂ ವಿದ್ಯಾರ್ಥಿನಿಯರಿಗೆ ಶಿಷ್ಯವೇತನ ಮಂಜೂರಾತಿ ಪತ್ರ ವಿತರಣೆ ಕಾರ್ಯಕ್ರಮ ಬನಹಟ್ಟಿಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಅಲ್ಲಮಪ್ರಭು ದೇವಸ್ಥಾನ ಕಮಿಟಿ ಅಧ್ಯಕ್ಷ ಪ್ರಭು ಮುಂಡಗನೂರ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ವೃತ್ತಿಪರ ಶಿಕ್ಷಣ ಪಡೆಯುತ್ತಿರುವ ಬನಹಟ್ಟಿ ವಲಯದ ಸ್ವಸಹಾಯ ಸಂಘಗಳ 14 ವಿದ್ಯಾರ್ಥಿನಿಯರಿಗೆ ಶಿಷ್ಯವೇತನದ ಮಂಜೂರಾತಿ ಪತ್ರಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಜಮಖಂಡಿ ತಾಲೂಕಿನ ಯೋಜನಾಧಿಕಾರಿ ನಿಂಗಪ್ಪ ಗುಡಸಲಮನಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸ್ವಸಹಾಯ ಸಂಘಗಳ ಸದಸ್ಯರಿಗೆ ಗುಂಪಿನ ಭದ್ರತೆಯ ಆಧಾರದ ಮೇಲೆ ಬ್ಯಾಂಕಿಂಗ್ ಸೌಲಭ್ಯಗಳನ್ನು ಒದಗಿಸುವುದರ ಜೊತೆಗೆ, ಹೆಣ್ಣು ಮಕ್ಕಳು ಉನ್ನತ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ವೃತ್ತಿಪರ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿನಿಯರಿಗೆ ಆರ್ಥಿಕ ನೆರವು ನೀಡುತ್ತಿದೆ. ಇದರ ಭಾಗವಾಗಿ 14 ವಿದ್ಯಾರ್ಥಿನಿಯರಿಗೆ ಶಿಷ್ಯವೇತನದ ಮಂಜೂರಾತಿ ಪತ್ರಗಳನ್ನು ನೀಡಿ, ಅವರ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ 16 ಒಕ್ಕೂಟಗಳ ಪದಾಧಿಕಾರಿಗಳಿಗೆ ಒಕ್ಕೂಟ ನಿರ್ವಹಣೆಯಲ್ಲಿ ಪದಾಧಿಕಾರಿಗಳ ಪಾತ್ರ, ದಾಖಲೆಗಳ ನಿರ್ವಹಣೆ ಹಾಗೂ ವಾರದ ಮತ್ತು ಒಕ್ಕೂಟ ಸಭೆಗಳ ಮಹತ್ವ ಸೇರಿದಂತೆ ವಿವಿಧ ವಿಷಯಗಳ ಕುರಿತು ತರಬೇತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಬನಹಟ್ಟಿ, ಯಲ್ಲಟ್ಟಿ ಹಾಗೂ ಕುಲಹಳ್ಳಿ ವಲಯಗಳ ಸುಮಾರು 75 ಪದಾಧಿಕಾರಿಗಳು, ತಾಲೂಕು ಕೃಷಿ ಅಧಿಕಾರಿ ಚನ್ನಯ್ಯ, ಲೆಕ್ಕಪರಿಶೋಧಕ ನಾಮದೇವ, ಮೂರು ವಲಯಗಳ ಮೇಲ್ವಿಚಾರಕರು ಹಾಗೂ ಸೇವಾ ಪ್ರತಿನಿಧಿಗಳು ಭಾಗವಹಿಸಿದ್ದರು.
ಬನಹಟ್ಟಿ ವಲಯ ಮೇಲ್ವಿಚಾರಕ ಶಿವಾನಂದ ಎಂ.ವೈ. ಸ್ವಾಗತಿಸಿದರು. ಯಲ್ಲಟ್ಟಿ ವಲಯ ಮೇಲ್ವಿಚಾರಕಿ ಜ್ಯೋತಿ ಎಂ. ವಂದಿಸಿದರು.

