ಶಿಕ್ಷಣ ತಪಸ್ವಿ ಡಾ. ಡಿ. ಸಿ. ಪಾವಟೆ: ಮಮದಾಪುರದಿಂದ ವಿಶ್ವಮಟ್ಟದವರೆಗೆ ಬೆಳಗಿದ ಜ್ಞಾನಜ್ಯೋತಿ
– ಬಸವರಾಜ ಬಾಳಿಕಾಯಿ, ತೇರದಾಳ
ಇತ್ತೀಚೆಗೆ ತೇರದಾಳ ಪಟ್ಟಣದ ನನ್ನ ಆತ್ಮೀಯ ಮಿತ್ರರಾದ ಮಹಾಂತೇಶ ಅವರೊಂದಿಗೆ ಗೋಕಾಕ ತಾಲೂಕಿನ ಮಮದಾಪುರಕ್ಕೆ ಭೇಟಿ ನೀಡುವ ಒಂದು ಅಪರೂಪದ ಸುಯೋಗ ದೊರೆಯಿತು. ಅದು ಕೇವಲ ಒಂದು ಹಳ್ಳಿಯಲ್ಲ; ನಾಡು ಕಂಡ ಅಪ್ರತಿಮ ವಿದ್ವಾಂಸ, ಕರ್ನಾಟಕದ ಶಿಕ್ಷಣ ರಂಗದ ದಿಕ್ಕನ್ನೇ ಬದಲಿಸಿದ ಮಹಾನ್ ಚೇತನ, ಪದ್ಮಭೂಷಣ ಪುರಸ್ಕೃತ ಡಾ. ಡಿ. ಸಿ. ಪಾವಟೆಯವರ (ದಾದಪ್ಪ ಚಿಂತಪ್ಪ ಪಾವಟೆ) ಪವಿತ್ರ ಜನ್ಮಸ್ಥಳ ಹಾಗೂ ಸ್ಮೃತಿ ಭೂಮಿ. ಆ ಪುಣ್ಯಭೂಮಿಯಲ್ಲಿ ಹೆಜ್ಜೆಯಿಡುತ್ತಿದ್ದಂತೆ ಅವರ ಬದುಕು, ಶಿಕ್ಷಣ ಕ್ರಾಂತಿ ಮತ್ತು ನಾಡಿಗೆ ನೀಡಿದ ಕೊಡುಗೆಗಳು ಕಣ್ಣೆದುರು ಸಾಕಾರಗೊಂಡವು.
ಕೇಂಬ್ರಿಜ್ ವಿಶ್ವವಿದ್ಯಾಲಯದಿಂದ ತಾಯ್ನಾಡಿನವರೆಗೆ :
ಗ್ರಾಮೀಣ ಭಾಗದ ಮಮದಾಪುರದಿಂದ ಹೊರಟ ಪಾವಟೆಯವರು ತಮ್ಮ ಅಗಾಧ ಪ್ರತಿಭೆಯಿಂದ ವಿಶ್ವವಿಖ್ಯಾತ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಉನ್ನತ ಗಣಿತ ವ್ಯಾಸಂಗ ಮಾಡಿ ‘ರ್ಯಾಂಗ್ಲರ್’ (Wrangler) ಗೌರವಕ್ಕೆ ಪಾತ್ರರಾದವರು. ವಿದೇಶದಲ್ಲಿ ಅಪಾರ ಅವಕಾಶಗಳಿದ್ದರೂ ತಾಯ್ನಾಡಿನ ಮೇಲಿನ ಪ್ರೇಮದಿಂದ ಭಾರತಕ್ಕೆ ಮರಳಿ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಗಣಿತ ಪ್ರಾಧ್ಯಾಪಕರಾಗಿ ಹಲವು ವರ್ಷ ಸೇವೆ ಸಲ್ಲಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ದಾರಿದೀಪವಾದರು.
ಮುಂಬೈ ಕರ್ನಾಟಕದಲ್ಲಿ ಶಿಕ್ಷಣದ ಅಡಿಪಾಯ
ಬ್ರಿಟಿಷ್ ಆಳ್ವಿಕೆಯ ಮುಂಬೈ ಸರ್ಕಾರದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕರಾಗಿ ಹಾಗೂ ಪ್ರಮುಖ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿದ ಪಾವಟೆಯವರು ಅಂದಿನ ಮುಂಬೈ ಕರ್ನಾಟಕ (ಇಂದಿನ ಕಿತ್ತೂರು ಕರ್ನಾಟಕ) ಭಾಗದ ಶಿಕ್ಷಣ ಪ್ರಗತಿಗೆ ಬಲವಾದ ಅಡಿಪಾಯ ಹಾಕಿದರು. ಹಳ್ಳಿಹಳ್ಳಿಗೂ ಶಾಲೆಗಳನ್ನು ವಿಸ್ತರಿಸಿ, ಹಿಂದುಳಿದ ವರ್ಗದ ಮಕ್ಕಳಿಗೆ ಶಿಕ್ಷಣದ ಬಾಗಿಲು ತೆರೆದ ಕೀರ್ತಿ ಇವರಿಗೆ ಸಲ್ಲುತ್ತದೆ.
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವನ್ನು ಕಟ್ಟಿ ಬೆಳೆಸಿದ ಪಾವಟೆಯವರ ಕಾರ್ಯಾವಧಿ ಇತಿಹಾಸದಲ್ಲಿ ‘ಸುವರ್ಣ ಯುಗ’ ಎಂದೇ ದಾಖಲಾಗಿದೆ. ಅತ್ಯುತ್ತಮ ಗ್ರಂಥಾಲಯ, ಸಂಶೋಧನಾ ವಿಭಾಗಗಳು ಮತ್ತು ಪ್ರಖ್ಯಾತ ಪ್ರಾಧ್ಯಾಪಕರನ್ನು ಕರೆತಂದು ಉತ್ತರ ಕರ್ನಾಟಕದಲ್ಲಿ ಉನ್ನತ ಶಿಕ್ಷಣದ ಕೇಂದ್ರವನ್ನಾಗಿ ರೂಪಿಸಿದರು.
ದೇಶ ಮೆಚ್ಚಿದ ಮಹಾನ್ ಮುತ್ಸದಿ :
ಶಿಕ್ಷಣ ಕ್ಷೇತ್ರಕ್ಕೆ ಅವರು ನೀಡಿದ ಮಹೋನ್ನತ ಸೇವೆಗಾಗಿ ಭಾರತ ಸರ್ಕಾರ ‘ಪದ್ಮಭೂಷಣ’ ಪ್ರಶಸ್ತಿ ನೀಡಿ ಗೌರವಿಸಿತು. ಜೊತೆಗೆ ಪ್ರತಿಷ್ಠಿತ ‘ಡಾಕ್ಟರ್ ಆಫ್ ಸೈನ್ಸ್’ (D.Sc.) ಪದವಿಯನ್ನಿತ್ತು ಕೇಂದ್ರ ಸರ್ಕಾರ ಸನ್ಮಾನಿಸಿತು. ನಂತರ ಪಂಜಾಬ್ ರಾಜ್ಯದ ರಾಜ್ಯಪಾಲರಾಗಿ ಅತ್ಯಂತ ಸಂಕೀರ್ಣ ರಾಜಕೀಯ ಸನ್ನಿವೇಶಗಳನ್ನು ದಕ್ಷತೆಯಿಂದ ನಿರ್ವಹಿಸಿ ದೇಶ ಕಂಡ ಧೀಮಂತ ಆಡಳಿತಗಾರ ಎನಿಸಿಕೊಂಡರು.
ನಮ್ಮ ಐತಿಹಾಸಿಕ ತೇರದಾಳದೊಂದಿಗೆ ಅವಿಸ್ಮರಣೀಯ ನಂಟು :
ಪಾವಟೆಯವರ ಹೆಜ್ಜೆಗುರುತು ನಮ್ಮ ತೇರದಾಳ ನೆಲದಲ್ಲೂ ಅಚ್ಚೊತ್ತಿರುವುದು ನಮ್ಮೆಲ್ಲರ ಸೌಭಾಗ್ಯ. 1973ರಲ್ಲಿ ಅವರು ನಮ್ಮ ತೇರದಾಳ ಪಟ್ಟಣಕ್ಕೆ ಆಗಮಿಸಿ, ಶಾಲಾ ಕೊಠಡಿಗಳನ್ನು ಉದ್ಘಾಟಿಸಿ ಗ್ರಾಮೀಣ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಿದ್ದರು. ಆ ಅಪರೂಪದ ಕ್ಷಣ ಇಂದಿಗೂ ತೇರದಾಳದ ಹಿರಿಯರ ನೆನಪಿನಲ್ಲಿ ಹಸಿರಾಗಿದೆ.
ಮಮದಾಪುರದ ಸ್ಮೃತಿ ಭೂಮಿಯಲ್ಲಿ ನಿಂತು ನೋಡಿದಾಗ, ಎಂತಹ ಗ್ರಾಮೀಣ ಪರಿಸರದಿಂದ ಬಂದ ವ್ಯಕ್ತಿಯೂ ಅಚಲ ಸಂಕಲ್ಪದಿಂದ ಜಾಗತಿಕ ಎತ್ತರಕ್ಕೆ ಬೆಳೆದು ಮತ್ತೆ ತನ್ನ ನೆಲದ ಜನರ ಏಳಿಗೆಗೆ ಸಮರ್ಪಿಸಿಕೊಳ್ಳಬಹುದು ಎಂಬುದಕ್ಕೆ ಡಾ. ಡಿ. ಸಿ. ಪಾವಟೆಯವರ ಬದುಕು ಇಂದಿನ ಪೀಳಿಗೆಗೆ ಬಹುದೊಡ್ಡ ಆದರ್ಶವಾಗಿದೆ. 

