ತೇರದಾಳ: ದಶಲಕ್ಷಣ ಪರ್ವದ ಕೊನೆಯ
ದಿನದ ಅಂಗವಾಗಿ ಪಟ್ಟಣದ ನೇಮಿನಾಥ ಗೋಂಕ ಜಿನಾಲಯದಲ್ಲಿ ಶ್ರಾವಕ-ಶ್ರಾವಕಿಯರಿಂದ ನೋಂಪಿ ವಿಸರ್ಜನಾ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ಜರುಗಿತು.
ಈ ಸಂದರ್ಭದಲ್ಲಿ ಮಾತನಾಡಿದ ಆಚಾರ್ಯ ಶ್ರೀ 108 ಧರ್ಮಸೇನ ಮಹಾರಾಜರು, ಜೈನ ಧರ್ಮದ ತತ್ವ-ಸಿದ್ಧಾಂತಗಳು ಜಗತ್ತಿನ ಎಲ್ಲ ಜೀವಿಗಳಿಗೂ ಸೌಹಾರ್ದಯುತವಾಗಿ ಬದುಕುವ ಹಕ್ಕಿದೆ ಎಂಬುದನ್ನು ಸಾರುತ್ತವೆ. ‘ನಾನು ಲೋಕದ ಸಕಲ ಜೀವಿರಾಶಿಗಳನ್ನು ಕ್ಷಮಿಸುತ್ತೇನೆ, ಸಕಲ ಜೀವಿರಾಶಿಗಳೂ ನನ್ನನ್ನು ಕ್ಷಮಿಸಲಿ’ ಎಂಬ ಸೌಹಾರ್ದದ ಸಂದೇಶವನ್ನು ಜೈನರು ಅನುಸರಿಸುತ್ತಾ ಬಂದಿದ್ದಾರೆ ಎಂದರು.
ದಶಲಕ್ಷಣ ಪರ್ವವು ಜೈನರಿಗೆ ನೀತಿಸಂಹಿತೆಯಂತಿದ್ದು, ಬದುಕಿನ ಕಲೆಯನ್ನು ಕಲಿಸುವ ಅಧ್ಯಾತ್ಮಿಕ ಪರ್ವವಾಗಿದೆ. ಸಾಮಾನ್ಯವಾಗಿ ಹಬ್ಬವೆಂದರೆ ಸಂಭ್ರಮ, ಸಡಗರ, ಸಂತೋಷ ಹಾಗೂ ಭೋಗದ ಕಲ್ಪನೆ ಮೂಡುತ್ತದೆ. ಆದರೆ ದಶಲಕ್ಷಣ ಪರ್ವ ಭೋಗದ ಪರ್ವವಲ್ಲ; ತ್ಯಾಗ, ವೈರಾಗ್ಯ ಹಾಗೂ ಆತ್ಮಶುದ್ಧಿಯ ಪರ್ವವಾಗಿದೆ ಎಂದು ಹೇಳಿದರು.
ಹತ್ತು ದಿನಗಳ ಕಾಲ ಆಚರಿಸುವ ಈ ಪರ್ವವು ಭಾವನೆಗಳನ್ನು ಪರಿಷ್ಕರಿಸಿ ಪರಿಶುದ್ಧಗೊಳಿಸುವುದರ ಜೊತೆಗೆ, ವ್ಯಕ್ತಿಯ ವರ್ತನೆಯಲ್ಲಿ ಪರಿವರ್ತನೆ ತರುವ ಉದ್ದೇಶ ಹೊಂದಿದೆ. ವಿಕಾರ ಭಾವನೆಗಳನ್ನು ತ್ಯಜಿಸಿ, ಮಾನವೀಯ ಮೌಲ್ಯಗಳನ್ನು ಒಳಗೊಂಡ ಉದಾತ್ತ ಭಾವನೆಗಳನ್ನು ಅಳವಡಿಸಿಕೊಳ್ಳುವುದೇ ಪರ್ವದ ಮೂಲ ಉದ್ದೇಶವಾಗಿದೆ ಎಂದರು.
ಪರ್ವದ ಸಂದರ್ಭದಲ್ಲಿ ಶ್ರಾವಕ-ಶ್ರಾವಕಿಯರು ಸಂಯಮ ಜೀವನ ನಡೆಸಿ ಜಪ, ತಪ, ಪೂಜೆ, ಧ್ಯಾನ ಹಾಗೂ ಪ್ರಾರ್ಥನೆಯಲ್ಲಿ ತೊಡಗುತ್ತಾರೆ. ತಮ್ಮ ವಯಸ್ಸು, ಶಕ್ತಿ ಹಾಗೂ ಸಾಮರ್ಥ್ಯಕ್ಕೆ ಅನುಗುಣವಾಗಿ ಉಪವಾಸ ಆಚರಿಸುತ್ತಾರೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ಸಾಮೂಹಿಕ ಮೆರವಣಿಗೆ ನಡೆಯಿತು. ಶ್ರಾವಕ-ಶ್ರಾವಕಿಯರಿಂದ ಧರ್ಮ ಘೋಷಗಳು ಮೊಳಗಿದವು. ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಬಸದಿ ಕಮಿಟಿ ಸದಸ್ಯರು, ಖ್ಯಾತ ವೈದ್ಯ ಡಾ. ಮಹಾವೀರ ದಾನಿಗೊಂಡ, ಊರಿನ ಧಣಿ ಪ್ರವೀಣ ನಾಡಗೌಡ ಸೇರಿದಂತೆ ಸಮಾಜದ ಮುಖಂಡರು ಹಾಗೂ ಭಕ್ತರು ಉಪಸ್ಥಿತರಿದ್ದರು.
ವರದಿ : ಸಾಗರ್ ಅಳಗೊಂಡ

