C
ರಬಕವಿ ಬನಹಟ್ಟಿ:
ರಬಕವಿ ಬನಹಟ್ಟಿ ನಗರಸಭೆ ವ್ಯಾಪ್ತಿಯ ರಬಕವಿ ನಗರದ ವಾರ್ಡ್ ನಂಬರ್ 23ರಲ್ಲಿ ಸಾರ್ವಜನಿಕರ ದೂರು-ದುಮ್ಮಾನಗಳನ್ನು ಆಲಿಸಿ, ನಿರಂತರವಾಗಿ ಜನರ ಪರ ಕೆಲಸ ಮಾಡುವ ಮೂಲಕ ಸ್ಥಳೀಯ ಭಾವಿ ಸದಸ್ಯ ಅಂತಲೇ ಸೊಹೈಲ್ ಅತ್ತಾರ್ ಅವರು ಜನಮನ್ನಣೆ ಗಳಿಸುತ್ತಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ತಮ್ಮ ವಾರ್ಡ್ನ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿರುವ ಇವರು, ಸದಾ ಜನರ ನಡುವೆಯೇ ಇದ್ದು ಕಾರ್ಯನಿರ್ವಹಿಸುತ್ತಿದ್ದಾರೆ. ವಾರ್ಡ್ನಲ್ಲಿ ಚರಂಡಿಗಳಲ್ಲಿ ಹೂಳು ತುಂಬಿ ಸರಾಗ ನೀರು ಹರಿಯದೆ ಉಂಟಾಗುತ್ತಿದ್ದ ಸಮಸ್ಯೆ ಹಾಗೂ ತ್ಯಾಜ್ಯ ವಿಲೇವಾರಿ ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಗಮನ ಸೆಳೆದ ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಜೆಸಿಬಿ ಯಂತ್ರ ಹಾಗೂ ಪೌರಕಾರ್ಮಿಕರ ಸಹಯೋಗದೊಂದಿಗೆ ದೊಡ್ಡ ಚರಂಡಿಗಳು ಹಾಗೂ ಕಾಲುವೆಗಳ ಹೂಳು ತೆಗೆಸಿ, ರಸ್ತೆ ಬದಿಯ ತ್ಯಾಜ್ಯ ತೆರವುಗೊಳಿಸುವ ಕಾರ್ಯವನ್ನು ತಾವೇ ಮುಂದೆ ನಿಂತು ಅಚ್ಚುಕಟ್ಟಾಗಿ ಪೂರ್ಣಗೊಳಿಸಿದ್ದಾರೆ. ಮಳೆಗಾಲದಲ್ಲಿ ಯಾವುದೇ ರೀತಿಯ ಸಾಂಕ್ರಾಮಿಕ ರೋಗಗಳು ಹರಡದಂತೆ ಹಾಗೂ ಜನರಿಗೆ ತೊಂದರೆಯಾಗದಂತೆ ಸ್ವಚ್ಛತಾ ಕಾರ್ಯಗಳನ್ನು ಸಮರೋಪಾದಿಯಲ್ಲಿ ಕೈಗೊಂಡಿದ್ದಾರೆ.
ಜನಪ್ರತಿನಿಧಿಯೊಬ್ಬರು ಜನರ ಕಷ್ಟಗಳಿಗೆ ತಕ್ಷಣವೇ ಸ್ಪಂದಿಸಿ, ಸ್ಥಳದಲ್ಲೇ ನಿಂತು ಕೆಲಸ ಮಾಡಿಸುತ್ತಿರುವುದನ್ನು ಕಂಡು ವಾರ್ಡ್ನ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಾರ್ಡ್ನ ಸರ್ವಾಂಗೀಣ ಅಭಿವೃದ್ಧಿಯೇ ನನ್ನ ಮೊದಲ ಆದ್ಯತೆ ಎಂದು ತಿಳಿಸಿದ ಅವರು, ನಾಗರಿಕರ ಸಹಕಾರದೊಂದಿಗೆ ವಾರ್ಡ್ ಅನ್ನು ಮಾದರಿಯಾಗಿ ರೂಪಿಸುವ ಸಂಕಲ್ಪ ಮುಂದುವರಿಯಲಿದೆ ಎಂದಿದ್ದಾರೆ. ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು, ನಗರಸಭೆ ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

