
ಪ್ರಜಾಸೌಧಕ್ಕೆ ಆಗ್ರಹಿಸಿ ಇಂದು ಬನಹಟ್ಟಿ ಬಂದ್
ರಬಕವಿ-ಬನಹಟ್ಟಿ: ತಾಲೂಕಿನ ಪ್ರಜಾಸೌಧ ಬನಹಟ್ಟಿನಗರದಲ್ಲಿ ನಿರ್ಮಾಣವಾಗಬೇಕೆಂದು ಆಗ್ರಹಿಸಿ ಬನಹಟ್ಟಿ ಅಭಿವೃದ್ಧಿ ಸಮೀತಿ ಶನಿವಾರ ಸಂಪೂರ್ಣ ಬಂದ್ಗೆ ಕರೆ ನೀಡಿದ್ದು, ನಗರದ ಎಲ್ಲ ವ್ಯಾಪಾರ ವಹಿವಾಟುಗಳನ್ನು ಸ್ತಬ್ದಗೊಳಿ, ಸಂಪೂರ್ಣ ಬನಹಟ್ಟಿ ಬಂದ್ ಮಾಡಲು ನಿರ್ಧರಿಸಿದೆ. ಭದ್ರನ್ನವರ ಕಲ್ಯಾಣ ಮಂಟಪದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಬಂದ್ ನಿರ್ಣಯ ಕೈಗೊಂಡು ಶನಿವಾರ ಬೆಳಿಗ್ಗೆ 9 ಗಂಟೆಗೆ ಬನಹಟ್ಟಿ ನಗರದ ಆರಾಧ್ಯದೈವ ಶ್ರೀ ಕಾಡಸಿದ್ದೇಶ್ವರ ದೇವಸ್ಥಾನದಿಂದ ನಗರದ ಸಾರ್ವಜನಿಕರು ಆಗಮಿಸಿ, ಅಲ್ಲಿಂದ ನಡೆಯುವ ಬೃಹತ್ ಪ್ರತಿಭಟನಾ ಮೆರವಣಿಗೆಯು ನಗರದ ಪ್ರಮುಖ ಬೀದಿ-ಬೀದಿಗಳಲ್ಲಿ ಸಂಚರಿಸಿ ಬನಹಟ್ಟಿ ಬಸ್ ನಿಲ್ದಾಣದ ಹತ್ತಿರದ ಚನ್ನಮ್ಮ ವೃತ್ತದಲ್ಲಿ ನಿರ್ಮಾಣಗೊಂಡ ಬೃಹತ್ ವೇದಿಕೆಗೆ ಆಗಮಿಸಿ, ಸತ್ಯಾಗ್ರಹ ನಡೆಯಲಿದೆ.
ನಗರದ ಸರ್ವ ಸಮಾಜಗಳ ಪ್ರಮುಖರು, ನೇಕಾರರು, ವಿವಿಧ ಸಂಘ-ಸಂಸ್ಥೆ, ಸಂಘಟನೆಗಳ ಪದಾಧಿಕಾರಿಗಳು ಸೇರಿದಂತೆ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಲಿದ್ದು, ಸರತಿಯ ಸತ್ಯಾಗ್ರಹ ನಡೆಯಲಿದೆ.
ಸಂಪೂರ್ಣ ಬಂದ್: ನಗರದ ಪ್ರಮುಖ ಉದ್ದಮೆಯಾದ ನೇಕಾರಿಕೆಯನ್ನು ಬಂದ್ ಮಾಡಿ,
ಖಾಸಗಿ ಹಾಗೂ ಸಾರ್ವಜನಿಕ ಸಾರಿಗೆ, ಶಾಲಾ-ಕಾಲೇಜು, ವ್ಯಾಪಾರೋದ್ಯಮ ಸೇರಿದಂತೆ ಎಲ್ಲ ವಹಿವಾಟುದಾರರು ಬಂದ್ಗೆ ಬೆಂಬಲ ಸೂಚಿಸಿದ್ದು, ತುರ್ತು ಸೇವೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.
ನ್ಯಾಯಯುತವಾದ ಬೇಡಿಕೆಯಾದ ಪ್ರಜಾಸೌಧವನ್ನು ಬನಹಟ್ಟಿಯಲ್ಲಿಯೇ ನಿರ್ಮಾಣ ಮಾಡಬೇಕು. ತಾಲೂಕಿನಲ್ಲಿಯೇ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ, ಭೌಗೋಳಿಕವಾಗಿ ಹೆಚ್ಚು ಪ್ರದೇಶವನ್ನು ಹೊಂದಿದ್ದು, 45 ಸಾವಿರಕ್ಕೂ ಅಧಿಕ ಮತದಾರರನ್ನು ಹೊಂದಿದ್ದು, 16 ವಾರ್ಡುಗಳನ್ನು ಹೊಂದಿರುವ ಬೃಹತ್ ನಗರ ಪ್ರದೇಶವಾಗಿದೆ. ಪ್ರಜಾಸೌಧ ನಿರ್ಮಾಣಕ್ಕೆ
ಅವಶ್ಯವಾಗಿರುವ ನಿವೇಶನವಿದ್ದು, ತಾಲೂಕಿನ ಕೇಂದ್ರ ಸ್ಥಳವಾಗಿದ್ದು, ಸುತ್ತಮುತ್ತಲಿನ ಗ್ರಾಮಗಳ ಅತೀ ಸಮೀಪದ ಸ್ಥಾನವಾಗಿದೆ. ಬನಹಟ್ಟಿಯಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಅವಶ್ಯವಾಗಿರುವ ಎಲ್ಲ ಮೂಲಭೂತ ಸೌಕರ್ಯಗಳನ್ನು ಹೊಂದಿದೆ. ಪ್ರಜಾಸೌಧ ನಿರ್ಮಾಣದಿಂದತಾಲೂಕಿನ ಎಲ್ಲ ಸಾರ್ವಜನಿಕರಿಗೆ ಅನುಕೂಲ ಹೆಚ್ಚು. ಪ್ರಜಾಸೌಧ ಹೋರಾಟದಲ್ಲಿ ಎಲ್ಲ ಜಾತಿ, ಧರ್ಮ, ಪಂತ ಮತ್ತು ಪಕ್ಷ ಬೇಧ ಮರೆತು ಬನಹಟ್ಟಿ ನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ಈ ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಬನಹಟ್ಟಿ ಸಾರ್ವಜನಿಕರ ಈ ಬೇಡಿಕೆ ನ್ಯಾಯಯುತವಾಗಿದೆ.

