ಆ.9ರಂದು ತೇರದಾಳದಲ್ಲಿ ಜೈನ ಪ್ರತಿಭಾ ಪುರಸ್ಕಾರ
ಆ.9ರಂದು ತೇರದಾಳದಲ್ಲಿ ಜೈನ ಪ್ರತಿಭಾ ಪುರಸ್ಕಾರ
ತೇರದಾಳ: ಅಖಿಲ ಕರ್ನಾಟಕ ಜೈನ ಅಲ್ಪಸಂಖ್ಯಾತರ ನೌಕರರ ಕ್ಷೇಮಾಭಿವೃದ್ಧಿ ಸಂಘದ ತೇರದಾಳ ಹಾಗೂ ರಬಕವಿ-ಬನಹಟ್ಟಿ ತಾಲೂಕು ಘಟಕಗಳ ಸಂಯುಕ್ತ ಆಶ್ರಯದಲ್ಲಿ 2025-26ನೇ ಸಾಲಿನ ಜೈನ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಕ್ಷೇತ್ರಗಳ ಸಾಧಕರ ಸನ್ಮಾನ ಕಾರ್ಯಕ್ರಮ ಆ.9ರಂದು ತೇರದಾಳದ ಗುರುಕುಲ ಆವರಣದಲ್ಲಿರುವ ಶ್ರೀ ಜಿನಸೇನಾಚಾರ್ಯ ಸಮುದಾಯ ಭವನದಲ್ಲಿ ನಡೆಯಲಿದೆ.
ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಮತ್ತು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿದವರನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಗಿರೀಶ್ ತಿಳಿಸಿದ್ದಾರೆ.
ಗುರುಕುಲ ಆವರಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ದತ್ತಿ ದಾನಿಗಳು, ಗುರು-ಹಿರಿಯರು ಹಾಗೂ ಸಂಘದ ಸದಸ್ಯರ ಸಹಕಾರದೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಸಿದ್ಧತೆ ಕೈಗೊಳ್ಳಲಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟಿ.ಸಿ.ಪಡಸಲಗಿ ವಹಿಸಲಿದ್ದು, ಡಾ. ಜಿ.ಬಿ. ಆಲಗೂರ ಉದ್ಘಾಟಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಆದಿನಾಥ್ ತಮದಡ್ಡಿ ಐಎಎಸ್ ಹಾಗೂ ಅತಿಥಿ ಉಪನ್ಯಾಸಕರಾಗಿ ಬೆಳಗಾವಿ ಪದವಿಪೂರ್ವ ಉಪನ್ಯಾಸಕರ ಸಂಘದ ಅಧ್ಯಕ್ಷ ಡಾ. ನಾಗರಾಜ್ ಪಾಲ್ಗೊಳ್ಳಲಿದ್ದಾರೆ.
ಶೇ.85ಕ್ಕಿಂತ ಹೆಚ್ಚು ಅಂಕ ಪಡೆದವರಿಗೆ ಗೌರವ

ಸಂಘದ ಪ್ರಧಾನ ಕಾರ್ಯದರ್ಶಿ ಭರತೇಶ್ ಲೋಕಾಪುರ ಮಾತನಾಡಿ, ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕ ಗಳಿಸಿದ ಜೈನ ಸಮುದಾಯದ ತೇರದಾಳ ಹಾಗೂ ರಬಕವಿ-ಬನಹಟ್ಟಿ ತಾಲೂಕಿನ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಗುವುದು. ಅರ್ಹ ವಿದ್ಯಾರ್ಥಿಗಳು ಆ.6ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಇದೇ ವೇಳೆ ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಜೈನ ಸಮುದಾಯದ ಸಾಧಕರಿಗೂ ಪುರಸ್ಕಾರ ನೀಡಲಾಗುವುದು. ಅರ್ಹರು ಹೆಸರು ನೋಂದಾಯಿಸಿಕೊಳ್ಳುವಂತೆ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಮಹೇಶ್ ಮಗದುಮ್ (78290 41207), ಮಹಾವೀರ್ ಸೌದತ್ತಿ (98458 03929), ಧರೆಪ್ಪ ಕಜವಟಕೊಪ್ಪ (89043 61008) ಹಾಗೂ ಮಲ್ಲಿನಾಥ್ ಬಾಬಣ್ಣವರ (95919 68108) ಅವರನ್ನು ಸಂಪರ್ಕಿಸಬಹುದು.

