ತೇರದಾಳ ಪಟ್ಟಣದಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವ ಆಚರಣೆ
ರೇಷ್ಮೆ, ಕಾಫಿ ಉತ್ಪಾದನೆಯಲ್ಲಿ ದೇಶಕ್ಕೇ ರಾಜ್ಯ ನಂಬರ್ ಒನ್
ವಿಶ್ವೇಶ್ವರಯ್ಯ, ಅನಿಲ್ ಕುಂಬ್ಳೆ, ಡಾ. ರಾಜ್ಕುಮಾರ್ ನಾಡಿಗೆ ಕೀರ್ತಿ ತಂದ ಮಹನೀಯರು: ಶಾಸಕ ಸಿದ್ದು ಸವದಿ
ತೇರದಾಳ : ಕರ್ನಾಟಕವು ಸಾಂಸ್ಕೃತಿಕ, ಐತಿಹಾಸಿಕ ಹಾಗೂ ಆರ್ಥಿಕವಾಗಿ ಅಪಾರ ಹಿರಿಮೆಯನ್ನು ಹೊಂದಿರುವ ಸಂಪದ್ಭರಿತ ನಾಡಾಗಿದ್ದು, ಪ್ರತಿಯೊಬ್ಬರೂ ನಿತ್ಯ ಜೀವನದಲ್ಲಿ ಕನ್ನಡವನ್ನು ಬಳಸುವ ಮೂಲಕ ಭಾಷೆಯನ್ನು ಉಳಿಸಿ ಬೆಳೆಸಬೇಕು ಎಂದು ತೇರದಾಳ ಮತಕ್ಷೇತ್ರದ ಶಾಸಕರಾದ ಸಿದ್ದು ಸವದಿ ಕರೆ ನೀಡಿದರು.
ಸ್ಥಳೀಯ ತೇರದಾಳ ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಕನ್ನಡ ರಾಜ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. “ದೇಶದಲ್ಲೇ ಮಹಾನ್ ಇಂಜಿನಿಯರ್ ಹಾಗೂ ಮುತ್ಸದ್ದಿ ಸರ್ ಎಂ. ವಿಶ್ವೇಶ್ವರಯ್ಯನವರು ನಮ್ಮ ರಾಜ್ಯದವರು ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ” ಎಂದರು.
ಉತ್ಪಾದನೆಯಲ್ಲಿ ಮುಂಚೂಣಿ:
ದೇಶದಲ್ಲಿ ಉತ್ಪಾದನೆಯಾಗುವ ಒಟ್ಟು ರೇಷ್ಮೆಯ ಮೂರನೇ ಎರಡರಷ್ಟು (2/3) ಭಾಗ ನಮ್ಮ ರಾಜ್ಯದಲ್ಲೇ ಬೆಳೆಯಲಾಗುತ್ತಿದ್ದು, ರೇಷ್ಮೆ ಉತ್ಪಾದನೆಯಲ್ಲಿ ಕರ್ನಾಟಕ ಅಗ್ರಗಣ್ಯ ರಾಜ್ಯವಾಗಿ ಹೊರಹೊಮ್ಮಿದೆ. ಅದೇ ರೀತಿ ದೇಶದ ಒಟ್ಟು ಕಾಫಿ ಉತ್ಪಾದನೆಯ ಶೇಕಡಾ 70ರಷ್ಟು ಪಾಲು ನಮ್ಮ ರಾಜ್ಯದ್ದಾಗಿದ್ದು, ನಂಬರ್ ಒನ್ ಸ್ಥಾನದಲ್ಲಿದೆ. ಗಂಧದ ನಾಡು ಎಂದೇ ಖ್ಯಾತಿ ಪಡೆದಿರುವ ನಮ್ಮ ರಾಜ್ಯವು ಶ್ರೀಗಂಧದ ಬೆಳೆಯಲ್ಲಿಯೂ ದೇಶದಲ್ಲೇ ಮುಂಚೂಣಿಯಲ್ಲಿದೆ ಎಂದು ಶಾಸಕರು ಹೆಮ್ಮೆಯಿಂದ ಉಲ್ಲೇಖಿಸಿದರು.
ಕ್ರೀಡೆ ಮತ್ತು ಕಲೆಗೆ ಕೊಡುಗೆ:
ಒಂದೇ ಪಂದ್ಯದಲ್ಲಿ 10 ವಿಕೆಟ್ ಕಬಳಿಸಿ ವಿಶ್ವದಾಖಲೆ ನಿರ್ಮಿಸಿದ ಕ್ರಿಕೆಟ್ ದಂತಕತೆ ಅನಿಲ್ ಕುಂಬ್ಳೆ ಹಾಗೂ ಇಡೀ ದೇಶದಲ್ಲೇ ಕನ್ನಡದ ಕೀರ್ತಿ ಪತಾಕೆ ಹಾರಿಸಿದ ನಟಸಾರ್ವಭೌಮ ಡಾ. ರಾಜ್ಕುಮಾರ್ ಅವರಂತಹ ದಿಗ್ಗಜರು ನಮ್ಮ ನಾಡಿನಲ್ಲಿ ಜನಿಸಿರುವುದು ನಮಗೆಲ್ಲ ಹೆಮ್ಮೆಯ ಸಂಗತಿ ಎಂದು ಸ್ಮರಿಸಿದರು.
ಕನ್ನಡ ಬಿಟ್ಟು ಬೇರೆ ಕಲಿಯಬೇಡಿ:
“ಬೇರೆ ಭಾಷೆಗಳನ್ನು ಕಲಿಯಲು ನಮ್ಮದೇನೂ ಅಭ್ಯಂತರವಿಲ್ಲ. ಜ್ಞಾನಕ್ಕಾಗಿ ಎಷ್ಟು ಭಾಷೆಗಳನ್ನಾದರೂ ಕಲಿಯಿರಿ, ಆದರೆ ಕನ್ನಡದ ಬಗೆಗಿನ ಪ್ರೀತಿ ಮತ್ತು ಅಭಿಮಾನ ಸದಾ ಜೀವಂತವಾಗಿರಬೇಕು. ಮಾತೃಭಾಷೆ ಕನ್ನಡವನ್ನೇ ಬಿಟ್ಟು ಬೇರೆ ಭಾಷೆ ಕಲಿಯುವಂತಹ ಮಹಾತಪ್ಪನ್ನು ಯಾರೂ ಮಾಡಬಾರದು” ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿದ ತಾಲೂಕು ದಂಡಾಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು, ಹಾಗೂ ಮುಖಂಡರುಗಳು , ಸಾರ್ವಜನಿಕರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿ ಗಳು , ಶಾಲಾ ಶಿಕ್ಷಕ ಶಿಕ್ಷಕಿಯರು


ಉಪಸ್ಥಿತರಿದ್ದರು.

