ಚಿತ್ರ: ಅಪಘಾತದಲ್ಲಿ ಕಾಲು ಕಳೆದುಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಬಸ್ಸುಮ ನದಾಫ್ ಅವರನ್ನು ಭೇಟಿಯಾದ ತೇರದಾಳ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ

ರಬಕವಿ : ನಗರದ ಹದಗೆಟ್ಟ ರಸ್ತೆಯೊಂದು ಮಹಿಳೆಯ ಬದುಕನ್ನೇ ಬದಲಿಸಿದ ದುರಂತಕ್ಕೆ ಕಾರಣವಾಗಿದೆ. ರಸ್ತೆ ಅವ್ಯವಸ್ಥೆಯಿಂದ ಸಂಭವಿಸಿದ ಅಪಘಾತದಲ್ಲಿ ತಪಸ್ಸುಮ ನದಾಫ್ ಎಂಬ ಮಹಿಳೆ ತನ್ನ ಒಂದು ಕಾಲನ್ನು ಕಳೆದುಕೊಂಡಿದ್ದು, ನಗರದ ರಸ್ತೆ ನಿರ್ವಹಣೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ರಬಕವಿ ನಗರದ ಪ್ರಮುಖ ರಸ್ತೆಗಳು ಹಲವು ದಿನಗಳಿಂದ ಹದಗೆಟ್ಟ ಸ್ಥಿತಿಯಲ್ಲಿದ್ದರೂ, ರಸ್ತೆ ದುರಸ್ತಿ ಹಾಗೂ ನಿರ್ವಹಣೆಗೆ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆ (PWD) ಅಧಿಕಾರಿಗಳು ಅಗತ್ಯ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬಂದಿದೆ. ರಸ್ತೆ ತುಂಬೆಲ್ಲ ಗುಂಡಿಗಳು, ಕಿತ್ತುಹೋದ ಡಾಂಬರು ಹಾಗೂ ಅವ್ಯವಸ್ಥೆಯಿಂದ ವಾಹನ ಸವಾರರು ಮಾತ್ರವಲ್ಲದೆ ಪಾದಚಾರಿಗಳೂ ಅಪಾಯ ಎದುರಿಸುವಂತಾಗಿದೆ.
ಇದೇ ಅವ್ಯವಸ್ಥೆಯ ನಡುವೆ ಸಂಭವಿಸಿದ ಅಪಘಾತದಲ್ಲಿ ತಬಸ್ಸುಮ ನದಾಫ್ ಅವರು ಗಂಭೀರವಾಗಿ ಗಾಯಗೊಂಡು ತಮ್ಮ ಕಾಲನ್ನೇ ಕಳೆದುಕೊಂಡಿರುವುದು ದುರಂತದ ತೀವ್ರತೆಯನ್ನು ತೋರಿಸುತ್ತದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಪಸ್ಸುಮ ಅವರನ್ನು ಭೇಟಿ ಮಾಡಿದ ಸ್ಥಳೀಯ ಮುಖಂಡರು ಹಾಗೂ ಸಾರ್ವಜನಿಕರು, ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
“ರಸ್ತೆ ದುರಸ್ತಿಯಾಗಿದ್ದರೆ ಈ ಅನಾಹುತ ತಪ್ಪಿಸಬಹುದಿತ್ತೇ?” ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ರಸ್ತೆ ದುರಸ್ತಿಗೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಸೂಕ್ತ ಕ್ರಮ ಕೈಗೊಳ್ಳದಿರುವುದೇ ಇಂತಹ ಅಪಘಾತಗಳಿಗೆ ಕಾರಣವಾಗುತ್ತಿದೆ ಎಂದು ನಾಗರಿಕರು ಆರೋಪಿಸಿದ್ದಾರೆ.
ತೇರದಾಳ ಕ್ಷೇತ್ರದ ಶಾಸಕ ಸಿದ್ದು ಸವದಿ ಅವರು ನಗರದ ರಸ್ತೆ ಸಮಸ್ಯೆಯತ್ತ ತಕ್ಷಣ ಗಮನಹರಿಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ಹದಗೆಟ್ಟ ರಸ್ತೆಗಳ ದುರಸ್ತಿ ಮಾಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಶಾಸಕರ ನಿರ್ಲಕ್ಷ್ಯದಿಂದಲೇ ರಸ್ತೆ ಸಮಸ್ಯೆ ಮುಂದುವರಿದಿದೆ ಎಂಬ ಆರೋಪವೂ ಕೇಳಿಬಂದಿದ್ದು, ಈ ಕುರಿತು ಶಾಸಕರ ಸ್ಪಷ್ಟನೆ ಅಗತ್ಯವಾಗಿದೆ.
ತಪಸ್ಸುಮ ನದಾಫ್ ಅವರ ಕುಟುಂಬಕ್ಕೆ ಸೂಕ್ತ ನೆರವು ಹಾಗೂ ಪರಿಹಾರ ನೀಡಬೇಕು. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ನಗರದ ಅಪಾಯಕಾರಿ ರಸ್ತೆಗಳನ್ನು ತಕ್ಷಣ ದುರಸ್ತಿ ಮಾಡಬೇಕು. ಇನ್ನೊಬ್ಬರ ಜೀವ ಅಥವಾ ಅಂಗಾಂಗ ಕಳೆದುಕೊಂಡ ನಂತರವೇ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕೇ? ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ಚಿತ್ರ: ಅಪಘಾತದಲ್ಲಿ ಕಾಲು ಕಳೆದುಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ತಪಸ್ಸುಮ ನದಾಫ್ ಅವರನ್ನು ಭೇಟಿಯಾದ ತೇರದಾಳ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಮುಖಂಡರಾದ ಸಿದ್ದು ಕೊಣ್ಣೂರ್ .

